Send As SMS

Tuesday, January 24, 2006

ಅಧ್ಯಾಯ ೧ "ಒರಟು ನಾಂದಿ" - ದೃಶ್ಯ ೨

ಒಂದು ಹಳೆಯ, ಕೊಳಕಾದ, ಬಿಳಿಯ ಬಣ್ಣದ ೧೯೮೨ ಮಾಡೆಲ್ ಅಂಬಾಸಡರ್, ಕೊರಕೊರಕೊರ ಅನ್ಕೊಂಡು, ನಿರ್ಗತಿರಿಂದ ತುಂಬಿದ ಕೆಂಡಲ್‍ವುಡ್ ನಗರದ ಒಂದು ಬೀದಿಯಲ್ಲಿ, ಅಲ್ಲಾಡುತ್ತಾ ಬರ್ತಾ ಇದೆ. ಫ್ರಂಟ್‍ಸೀಟ್ ನಲ್ಲಿ ಇಬ್ಬರು ಯುವಕರು ಕುಳಿತಿದ್ದಾರೆ - ಒಬ್ಬ ಸೌತ್‍ಸೈಡಿನ ತೊಳೆದಕೆಂಡ, ಇನ್ನೊಬ್ಬ ನಾರ್ತ್-ಸೈಡ್‍ನ ಬಿಳಿಜಿರಳೆ. ಈ ಹೈದರು ಕರಿ ಫುಲ್‍ಸೂಟ್, ಕರಿ ಟೈ, ಕರಿ ಕನ್ನಡಕ ಹಾಕಿದ್ದಾರೆ. ವಿನ್ಸೆಂಟ್ ವೇಗ (ಬಿಳಿಯ), ಜೂಲ್ಸ್ ವಿನ್ನ್ ಫೀಲ್ಡ್ (ಕರಿಯ). ಸ್ಟೀರಿಂಗ್ ಹಿಡಿದಿರೋನು ಜೂಲ್ಸ್.

ಜೂಲ್ಸ್: ಈಗ ಆ ಗಾಂಜಾ ಬಾರ್‍ಗಳ ಬಗ್ಗೆ ಸ್ವಲ್ಪ ಹೇಳು.

ವಿನ್ಸೆಂಟ್: ಏನೂ ಅಂತ ಹೇಳಲಿ ?

ಜೂಲ್ಸ್: ಅಲ್ವೋ, ಅಲ್ಲಿ ಗಾಂಜ ಎಲ್ಲಾ ಕಡೆ ಸಿಗುತ್ತಂತೆ, ಏನೂ ಕಾಯ್ದೆ-ಕಾನೂನೇ ಇಲ್ವಂತೆ ಗಾಂಜಾ ಮೇಲೆ ?

ವಿನ್ಸೆಂಟ್: ಒಂದರ್ಥದಲ್ಲಿ ನಿಜಾನೇ ಅನ್ನು, ಆದ್ರೆ ಏನೂ ಕಾಯ್ದೆ-ಗಿಯ್ದೆ ಇಲ್ಲ ಅನ್ನಾಕಾಗಲ್ಲ. ಅಂದ್ರೆ ನೀ ಸುಮ್ನೆ ಒನ್ದ್ ಹೋಟಲಿಗೆ ನುಗ್ಬಿ, ಗಾಂಜ ಏರ್ಸಿ, ದಮ್ ಎಳೆದ್ರೆ, ಅಲ್ಲೆರಡ್ ಕೊಟ್ ಒಳಗ್ತಳ್ತಾರೆ. ಗಾಂಜಾ ಹೊಡ್ಯೋಕೆ ಅಂತ ಜಾಗಗಳಿರ್ತವೆ, ಅಲ್ಲೇ ಹೋಗಿ ಏರಿಸ್ಬೇಕು, ಇಲ್ಲಾಂದ್ರೆ ಮನೇಲಿ.

ಜೂಲ್ಸ್: ಈ ಜಾಗಗೊಳೇನಾ ಗಾಂಜಾ ಬಾರ್‍ಗಳು ?

ವಿನ್ಸೆಂಟ್: ಹೂಂ, ನೋಡು ಹಿಂಗೆ ಇದು. ಗಾಂಜಾನ ತಗೋಬಹುದು, ಇಟ್ಕೊಬಹುದು, ನೀ ಏನಾರಾ ಗಾಂಜಾ ಬಾರ್ ಇಟ್ಟಿದ್ರೆ, ಅದನ್ನ ಮಾರಲೂಬಹುದು. ತಗೊಂಡ್ ಎಲ್ಬೇಕಾದರೂ ಓಡಾಡಬಹುದು, ನಮ್ ಮಾಮಂದ್ರು ಹಿಡಿದ್ರೂ, ಏನೂ ಕಿಸಿಯೋಕಾಗಲ್ಲ. ಅವರು ನಿನ್ನ ನಿಲ್ಲಿಸಿ, ಹಾಲ್ನಾಡಲ್ಲಿ ನಿನ್ನ ಹಾಗೆ ಹುಡುಕೋದೆ ಅಪರಾಧ, ಹೆಂಗೆ :)

ಜೂಲ್ಸ್: ಸಾಕ್ ಬಿಡು, ನಾ ಕ್ಯಾ... ಹೋಗ್ತಿದೀನಿ ಅಲ್ಲಿಗೆ.

ವಿನ್ಸೆಂಟ್: ಸಕ್ಕತ್ ಮಜಾ ತಗೋತೀಯಾ ಹೋಗು. ಆದ್ರೆ ಈ ಹಾಲ್ನಾಡಿಂದು ದೊಡ್ಡ ತಮಾಷೆ ಇಸ್ಯಾ ಅಂದ್ರೆ ಏನ್ ಗೊತ್ತಾ ?

ಜೂಲ್ಸ್: ಏನು ?

ವಿನ್ಸೆಂಟ್: ಈ ಸಣ್ಣ ಪುಟ್ಟ ಯತ್ವಾಸ. ನಮ್ಹತ್ರ ಇರೋ ಹೊಲಸೆಲ್ಲ ಅಲ್ಲೂ ಇದೆ ಅನ್ನು, ಆದ್ರೂ ಅವ್ರು ಸೊಲ್ಪ ಡಿಫರೆಂಟು.

ಜೂಲ್ಸ್: ಉದಾರಣೆಗೆ ?

ವಿನ್ಸೆಂಟ್: ಈಗ, ಹಾಲ್ಣಾಡಲ್ಲಿ, ಪಿಚ್ಚರ್ ನೋಡೋಕ್ ಹೋದ್ರೆ ಬಿಯರ್ ತಗೋಬಹುದು. ಅಂದ್ರೆ ಒಂದು ಪುಟ್ಗೋಸಿ ಪೇಪರ್ ಕಪ್‍ನಲ್ಲಲ್ಲ ! ದೊಡ್ಡ ಹಂಡೆ ಇಂದ ಉಯ್ಸ್ದು ಕೊಡ್ತಾರೆ, ದೊಡ್ಡ ಗ್ಲಾಸ್‍ನಲ್ಲಿ, ಒಳ್ಳೆ ಬಾರ್ ನಲ್ಲಿ ಕೊಡೋ ಹಾಗೆ. ಮತ್ತೆ, ನಂಚ್ಕೊಳೋಕೆ ಕಾಲ್ ಕೆ.ಜಿ ಖಾರಬೂಂದಿ ಕೊಡಿ ಅಂದೆ, ಒಳ್ಳೆ ಪೆಕರ್ ಥರ ನೋಡ್ತಿದ್ದ.

ಜೂಲ್ಸ್: ಯಾಕೆ ? ಅಲ್ಲಿ ಅದನ್ನ ಹಾಗೆ ಕೇಳಬಾರದಾ ?

ವಿನ್ಸೆಂಟ್: ಇಲ್ಲ, ಅಲ್ಲಿ ಮೆಟ್ರಿಕ್ ಸಿಸ್ಟಮ್ ಇಲ್ವಲ್ಲ, ಹೆಂಗ್ ಗೊತ್ತಾಗ್ಬೇಕ್ ಅವಕ್ಕೆ, ಕ್ಯಾ... ಕಾಲ್ ಕೆ.ಜಿ ಅಂದ್ರೆ ಏನು ಅಂತ ? ಕಾಲ್ ಪೌಂಡ್ ಅನ್ಬೇಕಿತ್ತಂತೆ !

ಜೂಲ್ಸ್: ಓ ಹಂಗೆ, ಕಾಲ್ ಪೌಂಡು, ಅವನ ಪಿಂಡ !

ವಿನ್ಸೆಂಟ್: ಇನ್ನೂ ಕೇಳು, ನಾವು ದೋಸೆ ತಿಂತೀವಲ್ಲ ಅದನ್ನೇ ಏನೋ ವಿಚಿತ್ರವಾಗಿ ದೋಸಾಯೇ ಅಂತಾರಪ್ಪ, ದರಿದ್ರವಾಗಿರತ್ತೆ ಕೇಳೋಕೆ

ಜೂಲ್ಸ್: ದೋಸಾಯೇ, ನಾ ಇದೊಳ್ಳೆ ದೋಸೆ, ನಾ ಸಾಯಿ ಅಂದಂಗಿದೆ ಥೂ, ವ್ಯಾ !

ವಿನ್ಸೆಂಟ್: ಮತ್ತೆ ನಮ್ಮ ಉದ್ದಿನ ವಡೆ ನ ಅದೇನೋ ಮೆದೋರ್ವಡಾಯೇ ಅಂತಾರಪ್ಪ,

ಜೂಲ್ಸ್: ಚಿಕನ್ ಬಿರಿಯಾನಿ ಹೆಂಗಿರುತ್ತೆ ?

ವಿನ್ಸೆಂಟ್: ಚಿ ಚಿ ನಾ ಮಾಂಸ ಮುಟ್ಟಾಕಿಲ್ಲ, ಮರೆತ್ಬಿಟ್ಯಾ ಪಾಪಿ ! ಮತ್ತೆ ಈ ಉದ್ದಿನ್ ವಡೇ.. ಅಲ್ಲ ಅಲ್ಲ ಮೆದೋರ್ವಡಾಯೇ, ಅದರ ಜೊತೆ ಏನ್ ಕೊಡ್ತಾರೆ ಗೊತ್ತಾ ?

ಜೂಲ್ಸ್: ಚಟ್ನಿ ನೇ ?

ವಿನ್ಸೆಂಟ್: ಅಲ್ಲ, ಅದೇನೋ ಸಾಂಪಾರಿ ಅಂತ ಕೊಟ್ನಪ್ಪ. ನೋಡಿದ್ರೆ, ನಮ್ಮ ಬೇಳೇ ಸಾರು, ಅದು ಬರಿ ನೀರ್ ನೀರಿತ್ತು ಅನ್ನು, ಯಾರಪ್ಪನ ಮನೆ ಗಂಟು ಹೋಗ್ಬೇಕು ಅಂತ ಆ ವಡೆನ ಪುಡಿ ಮಾಡಿ ಅದರಲ್ಲಿ ಕ್ಯಾ... ಮುಳುಗಿಸ್ಬಿಟ್ಟಿದ್ದ, ದರಿದ್ರದವನು, ಒಳ್ಳೆ ಆಯ್ಕೊಂಡ್ ತಿನ್ನೋ ಹಾಗಾಯ್ತು

ಜೂಲ್ಸ್: ತೂ ಕಕ್ಕ, ವ್ಯಾ !