Send As SMS

Saturday, January 21, 2006

ಒರಟು ಕಲ್ಪನೆ - ಅಧ್ಯಾಯ ೧ ಒರಟು ನಾಂದಿ : ದೃಶ್ಯ ೧

Original Work : Pulp Fiction by Quentin Tarantino
An attempt to bring it in Kannada Language: Sridhar Rajanna

This is a humble attempt by an ardent fan of the master film-maker (according to me), Quentin Tarantino, to bring his classic "Pulp Fiction" into Kannada. No commercial gain is sought by this endeavor. This is also in an attempt to help appreciate this classic masterpiece, better, by trying to follow the movie, in the local language of the translator.

ಅಧ್ಯಾಯ ೧ - ಒರಟು ನಾಂದಿ

ದೃಶ್ಯ ೧ - ದರ್ಶಿನಿಯಲ್ಲಿ ಬೆಳಿಗ್ಗೆ

ಚೆಂಗಳೂರಿನ ಒಂದು ಮಾಮೂಲಿ ದರ್ಶಿನಿ - style ರೆಸ್ಟೋರೆಂಟ್. ಈಗ ಸಮಯ ಬೆಳಗ್ಗೆ ೯:೦೦. ಜಾಗ ಅಷ್ಟೇನೂ ತುಂಬಿಲ್ಲ, ಆದರೂ ಒಂದಿಷ್ಟು ಜನ ಕೂತಿದ್ದಾರೆ. ಸ್ವಲ್ಪ ಜನ ಕಾಫಿ ಹೀರುತ್ತಾ , ಇನ್ನಷ್ಟು ಜನ ಇಡ್ಲಿ ತಿಂತಾ ಅಥವ ಬೇರರ್ ಮೇಲೆ ಕೆಂಡ ಕಾರ್ತಾ ಕೂತಿದ್ದಾರೆ.

ಇವರಲ್ಲಿಬ್ಬರು - "ಆ ಹುಡುಗ" ಹಾಗು "ಆ ಹುಡುಗಿ". ಆ ಹುಡುಗ - ಗಡ್ಡಧಾರಿ, ಕೈಯಲ್ಲೊಂದು ಬ್ಯಾಗು (ಅದೇ ಜೋಳಿಗೆ ತರದ್ದು), ಮಾತಾಡೋ ಶೈಲಿನೂ ಸ್ವಲ್ಪ ವಿಭಿನ್ನವಾಗಿದೆ, ಸಿಕ್ಕಾಪಟ್ಟೆ ಸಿಗರೆಟ್ ಸೇವನೆ ಬೇರೆ, ಇವನ ಪೈಕಿಯವರಂತೆ, ಇನ್ನೇನು ಪ್ರಪಂಚದ ಸಿಗರೆಟ್ ಗಳೆಲ್ಲ ಖಾಲಿಯಾಗಿ ಬಿಡಬಹುದೇನೋ ಅನ್ನೋ ಹಾಗೆ back-to-back ಸೇದಿ ಬಿಸಾಕ್ತಿರೋ chain smoker.

ಇನ್ನು "ಆ ಹುಡುಗಿ" - ಯಾವೂರಿನವಳೋ, ಎಷ್ಟು ವಯಸ್ಸೋ, ಒಂದೂ ಗೊತ್ತಾಗಲ್ಲ, ಒಡ್ಡು-ಒಡ್ಡಾಗಿದಾಳೆ, ಅವಳ ಮಾತಾಡ್ತಿರೋದಕ್ಕೂ, ಅವಳಿರೋದಕ್ಕೂ ಒಂದಿಷ್ಟೂ ಹೊಂದಾಣಿಕೆಯಿಲ್ಲ.

ಅದಿರಲಿ, ಆ ಹುಡುಗ, ಆ ಹುಡುಗಿ, ಇಬ್ಬರೂ ಒಂದು ಟೇಬಲ್ ಮುಂದೆ ಕೂತಿದ್ದಾರೆ. ಅವರ ಮಾತುಗಳೋ ಒಂದೆ ಉಸಿರಲ್ಲಿ ಬರ್ತಾನೆ ಇದೆ... ಹಂಸಲೇಖ ಬರೆದ ಆ breathless ಹಾಡಿನ ಹಾಗೆ...

ಆ ಹುಡುಗ: ಮರೆತುಬಿಡು ಹುಡುಗಿ. ಈ ಅಸಹ್ಯದ ಕೆಲಸ ನನ್ನಿಂದಾಗದು

ಆ ಹುಡುಗಿ: ನಿಂದ್ ಬರೀ ಇದೇ ಆಗೋಯ್ತು, ಯಾವಾಗ್ಲೂ ಅದೇ, ಆಗಲ್ಲ ಆಗಲ್ಲ. ನಂಗ್ ಸಾಕಾಗಿದೆ

ಆ ಹುಡುಗ: ನನಗೆ ತಿಳಿದಿದೆ, ನಾ ಅದೇ ಹೇಳುವೆನು. ಹಾಗು ನಾ ಹೇಳೋದೆಲ್ಲ ಸತ್ಯವೇ, ಆದರೆ....

ಆ ಹುಡುಗಿ: ಆದರೆ ಹೇಳಿದ್ದನ್ನ ಒಂದೆರಡ್ ದಿನ್ದಲ್ಲೇ ಮರೆತು ಹೋಗ್ತೀ !

ಆ ಹುಡುಗ: ಅದು ಬಿಡು, ನಾ ಮರೆತುಹೋಗೋ ದಿನಗಳೆಲ್ಲ ಮುಗಿದು ಹೋದವು, ಈಗ ಚಿರಕಾಲ ನೆನಪಿನಲ್ಲಿ ಉಳಿಯುವಂತ ದಿನಗಳು ಪ್ರಾರಂಭವಾಗಲಿದೆ

ಆ ಹುಡುಗಿ: ನೀ ಹೀಗೆ ಕುಯ್ಯೋಕೆ ಶುರು ಮಾಡಿದಾಗ ಹೇಗೆ ಕೇಳ್ಸುತ್ತೆ ಗೊತ್ತಾ ?

ಆ ಹುಡುಗ: ಹೇಗೆ ಕೇಳ್ಸುತ್ತೆ, ಕ್ಯಾ… ಬುದ್ಧಿಜೀವಿ ಹಾಗಾ ?

ಆ ಹುಡುಗಿ: ಒಳ್ಳೆ ಕೋಳಿ ಕೊ ಕೊ ಕೊ ಆಂದಂಗಿರುತ್ತೆ.. ಕೊ ಕೊ ಕೊ ಕೊ ಕೊ ಕೊ ಕೊ

ಆ ಹುಡುಗ: ನೋಡು, ಸರಿಯಾಗಿ ಗಮನ ಇಟ್ಟು ಕೇಳು, ಏಕೆಂದರೆ ಮತ್ತೆ ಇದನ್ನ ನೀನು ಕೇಳಬೇಕಾಗುವುದಿಲ್ಲ. ಏಕೆಂದರೆ, ಇದನ್ನ ನಾನು ಮತ್ತೆ ಯಾವತ್ತೂ ಮಾಡುವುದಿಲ್ಲ, ನೀನು ಮತ್ತೆ ಯಾವತ್ತೂ ನಾನು ಇದನ್ನ ಯಾಕೆ ಮತ್ತೆ ಯಾವತ್ತೂ ಮಾಡೋದಿಲ್ಲವೆಂದು ನಾ ಹೇಳುವ ಕೊ ಕೊ ಕೊ ಕೊ ಗಳನ್ನು ನೀನು ಇಂದಿನ ನಂತರ ಮತ್ತೆ ಯಾವತ್ತೂ ಕೇಳಬೇಕಾಗುವುದಿಲ್ಲ.

ಆ ಹುಡುಗಿ: ಇವತ್ ರಾತ್ರಿ ಆದ್ಮೇಲ್ ತಾನೆ ;)

ಆ ಹುಡುಗ, ಆ ಹುಡುಗಿ ಜೋರಾಗಿ ನಗುತ್ತಾರೆ, ಆ ನಗುವಿನಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ನಿಲ್ಲಿಸಿ ನಗುವರು.

ಆ ಹುಡುಗ: (ಮುಗುಳ್ನಗುತ್ತಾ), ಹೂಂ, ನಿಜ !, ಇಂದು ಇಡೀ ರಾತ್ರಿ ಇದೆ ನನಗೆ ಕೊ ಕೊ ಕೊ ಕೊ ಅನ್ನೋಕೆ J
(ಬೇರರ್ ಕಾಫಿಯೊಡನೆ ಬಂದು ನಿಲ್ಲುತ್ತಾಳೆ.)

ಬೇರರ್: ಇನ್ನು ಸ್ವಲ್ಪ ಕಾಫಿ ತಗೋತೀರಾ ?

ಆ ಹುಡುಗಿ: ಹೂಂ ಹೂಂ, ಹಾಕು ಹಾಕು !

(ಬೇರರ್ ತನ್ನ ಬಳಿ ಇದ್ದ ಕಾಫಿ ಕ್ಯಾನಿನಿಂದ ಆ ಹುಡುಗಿಯ ಮುಂದಿದ್ದ ಕಪ್ ಗೆ ಕಾಫಿ ಸುರಿಯುವಳು. ಆ ಹುಡುಗ, ಮತ್ತೊಂದು ಸಿಗರೇಟಿಗೆ ಲೈಟರ್ ಅಂಟಿಸುತ್ತಾನೆ.)

ಆ ಹುಡುಗ: ನನಗೆ ಕಾಫಿ ಸಾಕು.

(ಬೇರರ್ ಟೇಬಲ್ ಬಿಟ್ಟು ಹೊರಡುವಳು. ಆ ಹುಡುಗ ಒಮ್ಮೆ ಸಿಗರೇಟಿನ ಹೊಗೆ ಎಳೆಯುತ್ತಾ ಇರಬೇಕಾದರೆ, ಆ ಹುಡುಗಿ ಕಾಫಿಗೆ ತನಗೆ ಸರಿಯಾಗಿ ಎರಡು ಚಮಚ ಸಕ್ಕರೆ ಹಾಕಿಕೊಳ್ಳುತ್ತಿರುತ್ತಾಳೆ.)

ಆ ಹುಡುಗ: (ಮತ್ತೊಮ್ಮೆ ಹೊಗೆ ಎಳೆಯುತ್ತಾ...) ”ಹಾಗೆ ನೋಡೋಕೆ ಹೋದ್ರೆ, ಈಗ ಹೇಗಿದೆ ಅಂದ್ರೆ, ನೀನು ಒಂದು ಬ್ಯಾಂಕ್ ಲೂಟಿ ಮಾಡೋದಕ್ಕೂ ಅದೇ ಕ್ಯಾ… ರಿಸ್ಕ್ ತಗೋತಿಯಾ. Actually, ಇನ್ನು ಹೆಚ್ಚಿನ ರಿಸ್ಕ್ ತಗೋತಿದೀಯ. ಬ್ಯಾಂಕ್‍ಗಳೇ ವಾಸಿ. ಸರ್ಕಾರಿ ಬ್ಯಾಂಕ್ನಲ್ಲಿ ಲೂಟಿ ಮಾಡಿದ್ರೆ ಯಾರೂ ನಿನ್ನ ತಡೆಯೋ ಆಗಿಲ್ಲ. ಯಾಕ್ ಗೊತ್ತಾ? ಎಲ್ಲ ಇನ್ಶುರೆನ್ಸ್ ಮಾಡ್ಸಿರ್ತಾರೆ, ಕ್ಯಾ... ರೆ ಅನ್ನೊಲ್ಲ. ಸರ್ಕಾರಿ ಬ್ಯಾಂಕ್ ಲೂಟಿ ಮಾಡೋಕೆ ಗನ್ ಕೂಡ ಬೇಡ ಗೊತ್ತಾ ?
ಇವನ್ ಬಗ್ಗೆ ಕೇಳಿದ್ದೆ, ಸೀದ ಸರ್ಕಾರಿ ಬ್ಯಾಂಕ್ ಒಳಗೆ ನುಗ್ಗಿದ, ಕೈಯಲ್ಲಿ ಒಂದು ಮೊಬೈಲ್ ಅಷ್ಟೆ. ಟೆಲರ್ ಹತ್ರ ಹೋದವನೇ ಅವನ ಕೈಗೆ ಮೊಬೈಲ್ ಕೊಟ್ಟ. ಫೋನ್‍ನಲ್ಲಿ ಮಾತಾಡಿದ ದನಿ ಹೇಳಿತು: ನಿನ್ನ ಮುಂದೆ ನಿಂತಿರುವನ ಪುಟ್ಟ ಮಗಳು ನಮ್ಮ ಹತ್ರ ಇದಾಳೆ, ಇವನಿಗೆ ನಿಮ್ಮ ಹತ್ರ ಇರೋ ಎಲ್ಲ ದುಡ್ಡು ಕೊಡಲಿಲ್ಲ ಅಂದರೆ, ಈ ಮಗುನ ಸಾಯಿಸಿಬಿಡ್ತೇವೆ !"

ಆ ಹುಡುಗಿ: ಆಮೇಲೆ, ಏನಾಯ್ತು, ವರ್ಕ್ ಆಯಿತಾ ?

ಆ ಹುಡುಗ: ನಿನ್ನ.... ಅಫ್ ಕೋರ್ಸ್ ವರ್ಕ್ ಆಯಿತು, ಅದೇ ಕಣೆ ನಾ ಹೇಳ್ತಿರೋದು. ಯಾರೋ ಗಾಂಪನ ಹಾಗಿರೋನು, ಬ್ಯಾಂಕ್‍ಗೆ ನುಗ್ಗಿದಾನೆ, ಅದೂ ಒಂದು ಸಣ್ಣ ಮೊಬೈಲ್ ಹಿಡ್ಕೊಂಡು, ಪಿಸ್ತೂಲಿಲ್ಲ, ಎ.ಕೆ.೪೭ ಇಲ್ಲ, ಎಲ್ಲಾ ಬಿಟ್ಟೂ ಒಂದು ಕ್ಯಾ... ಮೊಬೈಲ್, ಎಲ್ಲಾನು ಸಾರಿಸಿ ಗುಡಿಸಿ ರಂಗೋಲಿ ಇಟ್ಟೂ ಹೋಗಿದಾನೆ, ಯಾರು ಒಂದು ಕ್ಯಾ... ಬೆರಳೆತ್ತಿಲ್ಲ.

ಆ ಹುಡುಗಿ: ಆ ಪುಟ್ಟ ಹುಡುಗಿಗೆ ಏನಾದ್ರು ಮಾಡಿದ್ರ ಅವರು !!!

ಆ ಹುಡುಗ: ನಂಗೊತ್ತಿಲ್ಲ, ಬಹುಷಃ ಪುಟ್ಟ ಹುಡುಗಿ ಇರಲೇ ಇಲ್ಲ, ನೋಡು, ಈ ಕಥೆ ಆ ಪುಟ್ಟ ಹುಡುಗಿ ಬಗ್ಗೆ ಅಲ್ಲ, ಈ ಕಥೆ After all ಒಂದು ಮೊಬೈಲ್ ಹಿಡ್ಕೊಂಡು ಒಂದ್ ಬ್ಯಾಂಕ್ ಲೂಟಿ ಮಾಡಿದ್ದರ ಬಗ್ಗೆ.

ಆ ಹುಡುಗಿ: ನೀ ಬ್ಯಾಂಕ್ ಲೂಟಿ ಮಾಡ್ಬೇಕ ?

ಆ ಹುಡುಗ: ಬ್ಯಾಂಕ್ ಲೂಟಿ ಮಾಡ್ತೀನಿ ಅನ್ನಲಿಲ್ಲ. ಒಂದ್ ಪಕ್ಷ ಮಾಡಿದ್ರೂನು, ಈಗ ಮಾಡ್ತಿರೋದಕ್ಕಿಂತ ಸುಲಭವಾಗೇ ಇರುತ್ತೆ.

ಆ ಹುಡುಗಿ: Sooo, ನಿಂಗೆ ಬ್ಯಾಂಕ್ ಲೂಟಿ ಮಾಡ್ಬೇಕಿಲ್ಲ ಅಲ್ವಾ ?

ಆ ಹುಡುಗ: Nooo, ಹಾಗೆ ಮಾಡಿದವರೆಲ್ಲಾ ಅದೇ ರೋಡ್ ಕೆಳಗೆ ಹೋಗಿರ್ತಾರೆ, ಒಂದು ಸತ್ತಿರ್ತಾರೆ, ಇಲ್ಳಾ ೨೦ ವರ್ಷ ಕಠಿಣ ಶಿಕ್ಷೆ.

ಆ ಹುಡುಗಿ: ಸರಿ, ವೈನ್ ಶಾಪ್‍ಗಳು ??

ಆ ಹುಡುಗ: ಎಷ್ಟ್ ಸಲ ಹೇಳಿದೀನಿ ನಿಂಗೆ, ವೈನ್ ಶಾಪ್‍ಗಳೆಲ್ಲಾ ಬೇಡ ಅಂತ. ಅದೂ ಅಲ್ದೆ, ಮುಂಚೆ ಇದ್ದ ಮಜಾ ಇಲ್ಲ, ಈ ವೈನ್ ಶಾಪ್‍ಗಳಲ್ಲಿ, ಸಿಕ್ಕಾ ಪಟ್ಟೆ ಪರಕೀಯರು ಬಂದ್ ಸೇರ್ಕೊಂಡಿದಾರೆ, ಅಲ್ಲಿಯವರು, ಇಲ್ಲಿಯವರು, ಅವರ ಕ್ಯಾ.. ಬಾಯಿಂದ ಕನ್ನಡನೆ ಹೊರಗೆ ಬರಲ್ಲ. "ನಿನ್ನ ಹತ್ರ ಇರೋ ದುಡ್ಡೆಲ್ಲ ತೆಗಿ," ಅಂದರೆ ಮುಖ್ ಮುಖ ನೋಡ್ತ್ರಿರ್ತಾರೆ. ಒಂದಲ್ಲ ಒಂದ್ ದಿನ ಈ ಕ್ಯಾ... ನನ್ಮಕ್ಳನ್ನ ಯಾರಾದ್ರು ಎಗರಿಸಿ ಬಿಡ್ತಾರೆ ನೋಡ್ತಿರು.

ಆ ಹುಡುಗಿ: ನಾ ಯಾರನ್ನೂ ಸಾಯಿಸೋಲ್ಲ.

ಆ ಹುಡುಗ: ನಂಗೂ ಯಾರನ್ನೂ ಸಾಯಿಸೋಕೆ ಇಷ್ಟ ಇಲ್ಲ. ಆದರೆ ಇವರೆಲ್ಲಾ ನಮ್ಮನ್ನ ಯಾವ ಸ್ಥಿತಿಗ ತಳ್ತಾರೆ ಅಂದರೆ, ಒಂದು ನಾವು, ಇಲ್ಲ ಇವರುಗಳು. ಇನ್ನು ಇವರಿಬ್ಬರು ಅಲ್ಲ್ದೇ ಇನ್ನೊಂದು ಗುಂಪಿನವರದ್ದೋ ಕಥೆ ಕೇಳಲೇ ಬೇಡ, ಬಡ್ಡಿ ಮಕ್ಳು ಕ್ಯಾ... ೨೦-೨೫ ವರ್ಷಗಳಿಂದ ಬಾರ್ ಇಟ್ಕೊಂಡಿದಾರೆ. ಆ ಮುದಿಯ ಕೂತಿರ್ತಾನೆ, ಕೌಂಟರ್ ಹಿಂದೆ, ಎ.ಕೆ.೪೭ನು ಮೀರಿಸ್ಬೇಕ್ ಅಂಧದ್ದು ಇಟ್ಟಿದ್ದಾನೆ. ಆ ರೀತಿ ಅಂಗಡಿಗಳ ಒಳಗೆ ಒಂದ್ಸಲ ಹೋಗಿ, ಏನೂ ಭೇಡ ಒಂದೇ ಒಂದು ಟೆಲಿಪೋನ್ ಎತ್ಕೊಂಡ್ ಬಾ ನೋಡೋಣ, ಎಷ್ಟ್ ದೂರ ಎತ್ಕೊಂಡ್ ಬರ್ಸುತ್ತೆ ನೋಡ್ತಿರು. ಬಿಟ್ಟಾಕ್, ಅದೆಲ್ಲಾ ಆಗೋ ವಿಷ್ಯ ಅಲ್ಲ.

ಆ ಹುಡುಗಿ: ಇನ್ಣೇನಿದೆ ಮತ್ತೆ, ೯-೫ ಕೆಲಸ ?

ಆ ಹುಡುಗ: (ಜೋರಾಗಿ ನಗುತ್ತಾ), ಈ ಜನ್ಮದಲ್ಲಿ ಸಾಧ್ಯವಿಲ್ಲ.

ಆ ಹುಡುಗಿ: ಇನ್ನೇನ್ ಮತ್ತೆ ???

ಆ ಹುಡುಗ (ಬೇರರ್ ಗೆ ಜೋರಾಗಿ): ಮೋಳೆ, ಕಾಫಿ !
ಮತ್ತೆ ತನ್ನ ಹುಡುಗಿಯತ್ತ ನೋಡುತ್ತಾ...

ಆ ಹುಡುಗ: "ಈ ಜಾಗ" !

ಬೇರರ್ ಬಂದು, ಇನ್ನಷ್ಟು ಕಾಫಿ ಸುರಿಯುತ್ತಾ, ಒಮ್ಮೆ ಆ ಹುಡುಗನನ್ನು ಗುರಾಯಿಸುತ್ತಾ "ಮಾಣಿ ಅಂದರೆ ಹುಡುಗ" ಎಂದು ಹೇಳಿ ಹೊರಡುವಳು.

ಆ ಹುಡುಗಿ: ಇಲ್ಲಾ !! ಎಲ್ಲಾ ಬಿಟ್ಟು ಈ ಕಾಫಿ - ತಿಂಡಿ ದರ್ಶಿನಿಲಾ !!

ಆ ಹುಡುಗ: ಏನ್ ತಪ್ಪು, ಅಲ್ಲಾ ಏನ್ ತಪ್ಪು ಅಂತ ? ಜನ ರೆಸ್ಟೊರೆಂಟ್‍ಗಳನ್ನೇ ದೋಚೊಲ್ವ , ಯಾಕ್ ಮಾಡಲ್ಲ ? ಬಾರ್, ವೈನ್ ಶಾಪ್, ಪೆಟ್ರೊಲ್ ಬಂಕ್‍ಗಳಲ್ಲಿ ಮಾಡು, ತಲೆ ಎಗರಿ ಹೋದೀತು, ಅಲ್ಲೆಲಾದರೂ ಮಾಡೋಕ್ ಹೋದ್ರೆ. ಇನ್ನು ರೆಸ್ಟೊರೆಂಟ್‍ಗಳು, ಅವರು ಅಂದ್ಕೊಂಡಿರಲೇ ಬಾರದು, ಅಥವ ಅಷ್ಟು ಅಂದ್ಕೊಂಡಿರಬಾರದು, ಗಬಕ್ ಅಂಥ ಹಿಡೀಬಹುದು.

ಆ ಹುಡುಗಿ: ಹೂಂ, ಇಂಥ ಜಾಗಗಳಲ್ಲಿ, ನೀ ಏನ್ ಅಂತ ಧಮ್ ಇಟ್ಟಿರಬೇಕಿಲ್ಲ ಬಿಡು.

ಆ ಹುಡುಗ: ಒಂದ್ ಥರ ಹಾಗೇನೆ, ಬ್ಯಾಂಕ್‍ಗಳಂತೆ ಇಂಥ ಸಣ್ಣ ಹೋಟಲುಗಳಿಗೂ ಇನ್ಶುರೆನ್ಸ್ ಮಾಡ್ಸಿರ್ತಾರೆ. ಮ್ಯಾನೇಜರ್‍ಗಳು ಕ್ಯಾ.. ಅನ್ನಲ್ಲ, ಸಾಕು ಅವರಿಗೆ, ಇಲ್ಲಿಗೆ ತಿನ್ನೋಕೆ ಬಂದಿರೋರಿಗೆ ತೊಂದರೆ ಕೊಡರೆ ನೀ ಜಾಗ ಖಾಲಿ ಮಾಡಿದ್ರೆ ಸಾಕು ಅವರಿಗೆ. ಬೇರರ್‍ಗಳ ? ಬಿಟ್ಟಾಕು, ಇಂಥದ್ದಕ್ಕೆಲ್ಲ ಒಂದು ಬುಲೆಟ್ ಮುಂದೆ ನಿಲ್ಲುವಷ್ಟು ತಲೆ ಕೆಟ್ಟಿಲ್ಲ. ಕ್ಲೀನರ್‍ಗಳು, ದಿನಗೂಲಿಗೆ ಬಂದ್ ಹೋಗೋರು, ಸಾಯಲಿ ಬಡ್ಡಿ ಮಗ ಅಂದ್ಕೊಂಡ್ ಸುಮ್ನೆ ಇರ್ತಾರೆ. ಇನ್ನು ಇಲ್ಲಿಗೆ ತಿನ್ನೋಕೆ ಬಂದಿರೋರಾ ? ಬಾಯಲ್ಲಿ ತಿಂಡಿ ಇರುತ್ತೆ, ಮಾತಾಡೋಕೆ ಬಾಯಿ ತೆಗೆಯೋಕು ಆಗದೆ ಕೂತಿರ್ತಾರೆ. ಅವರಿಗೆ ಏನಾಗ್ತಿದೆ ಅಂತ ಗೊತ್ತೇ ಆಗ್ತಿರಲ್ಲ. ಮಸಾಲೆ ದೋಸೆ ತಿಂತಿರೋನ ಮುಖಕ್ಕೆ ಗನ್ ಹಿಡಿದಿರ್ತೀವಿ !

(ಆ ಹುಡುಗಿ, ಇನ್ನೇನು ಈ ಪ್ಲಾನ್ ಗೆ ಒಪ್ಪಿಕೊಂಡಂತೆ ಕಾಣ್ತಿದ್ದಾಳೆ. ಆ ಹುಡುಗ ಮೆಲುದನಿಯಲ್ಲಿ ಮುಂದುವರೆಸುವನು)

ಆ ಹುಡುಗ: ನೋಡು, ನಂಗೆ ಈ ಐಡಿಯಾ ಆ ವನ್ ಶಾಪ್‍ನಲ್ಲಿ ಸಿಗಾಕೊಂಡ್ವಲ್ಲ ಆವಾಗ ಬಂತು. ನೆನಪಿದ್ಯ, ಕುಡಿಯೋರೆಲ್ಲ ಬರೋಕೆ ಶುರು ಮಾಡಿದ್ರು...

ಆ ಹುಡುಗಿ: ಹೌದು

ಆ ಹುಡುಗ: ಆಗ ನಿಂಗೆ ಅವರೆಲ್ಲರ ಪರ್ಸ್ ಎತ್ತಕೊಳೋ ಯೋಚನೆ ಬಂತು ತಾನೆ ?

ಆ ಹುಡುಗಿ: ಹೂಂ ಹೂಂ

ಆ ಹುಡುಗ: ಬಹಳ ಒಳ್ಳೆ ಕೆಲಸ ಮಾಡಿದ್ದೆ ನೀನು.

ಆ ಹುಡುಗಿ: ಹೂಂ, ಥ್ಯಾಂಕ್ಸ್

ಆ ಹುಡುಗ: ಆವತ್ತು ಆ ಕೌಂಟರ್‍ನಲ್ಲಿ ಮಾಡಿದ್ದಕ್ಕಿಂತ ಜಾಸ್ತಿ, ಆ ಪರ್ಸ್‍ಗಳಿಂದ ಮಾಡಿದ್ವಿ.

ಆ ಹುಡುಗಿ: ಹೌದು, ಮಾಡಿದ್ವಿ.

ಆ ಹುಡುಗ: ಈಗ ಈ ರೀತಿ ದರ್ಶಿನಿಗೆ ತುಂಬಾ ಜನ ಬರ್ತಾರೆ.

ಆ ಹುಡುಗಿ: ತುಂಬಾ ಪರ್ಸ್‍ಗಳು ಬರುತ್ತವೆ :) :)

ಆ ಹುಡುಗ: ಜಾಣೆ, ನೀನು.

ಆ ಹುಡುಗಿ, ಒಮ್ಮೆ ದರ್ಶಿನಿಯ ಸುತ್ತಾ ಕಣ್ಣು ಹಾಯಿಸುತ್ತಾಳೆ. ಗಿರಾಕಿಗಳೆಲ್ಲ ತಿಂತಿದಾರೆ, ತಮ್ಮ ಮಾತುಗಳಲ್ಲಿ ಕಳೆದು ಹೋಗಿದ್ದಾರೆ, ಸುಸ್ತಾದಂತೆ ಕಾಣುತ್ತಿರೋ ನಮ್ಮ ಈ ಮಹಿಳಾ ಬೇರರ್, ಎಲ್ಲರ ಆರ್ಡರ್‍ಗಳನ್ನು ತಗೋತಿದ್ದಾಳೆ. ಕ್ಲೀನರ್‍ಗಳು ಓಡಾಡಿಕೊಂಡು ಚಕಚಕನೆ ತಟ್ಟೆತೆಗೆಯುತ್ತಿದ್ದಾರೆ. ಮ್ಯಾನೇಜರ್ ಅಡುಗೆಭಟ್ಟನಿಗೆ "ಇನ್ನೊಂದೆರಡ್ ಪ್ಲೇಟ್ ಇಡ್ಲಿ-ವಡೆ" ಅಂಥ ಕೂಗುತ್ತಿರುವನು.

ಮಂದಹಾಸವೊಂದು "ಆ ಹುಡುಗಿ"ಯ ಮೊಗದಲ್ಲಿ ಕಾಣಿಸಿಕೊಂಡಿತು.

ಆ ಹುಡುಗಿ: ಜಾಣೆ, ನಾನು :)
(ಉತ್ಸಾಹ ಭರಿತಳಾಗಿ)
ನಾ ರೆಡಿ, ಬಾ ಹೋಗೋಣ, ಈವಾಗಲೇ, ಇಲ್ಲೇ !

ಆ ಹುಡುಗಿ: I LOVE YOU, ಕುಂಬಳಕಾಯಿ

ಆ ಹುಡುಗ: I LOVE YOU, ಜೇನುತುಪ್ಪ

ಅದಾದ ತಕ್ಷಣ, ಕುಂಬಳಕಾಯಿ ಮತ್ತು ಜೇನುತುಪ್ಪ ತಮ್ಮ ಆಯುಧಗಳನ್ನು ಕೈಗೆತ್ತುಕೊಂಡು, ಎದ್ದು ನಿಲ್ಲುವರು, ದರ್ಶಿನಿ ಲೂಟಿ ಮಾಡಲು. ಕುಂಬಳಕಾಯಿ ನಡೆದುಕೊಳ್ಳುತ್ತಿರುವ ರೀತಿಯ ಸಂಪೂರ್ಣ ಹಿಡಿತದಲ್ಲಿರುವ ವೃತ್ತಿಪರ ದರೋಡೆಕೋರನದಾದರೆ, ಜೇನುತುಪ್ಪಳೋ ಮಾನಸಿಕವಾಗಿ ಅಸ್ವಸ್ಥಳಾದಂತೆ, ಸಡಿಲಗೊಂಡ ಕೋವಿಯಂತಾಗಿದ್ದಾಳೆ.

ಕುಂಬಳಕಾಯಿ (ಜೋರಾಗಿ ಕೂಗುತ್ತಾ): ಎಲ್ಲರೂ ಆರಾಮಾಗಿ ಕೂತ್ಕೊಳ್ಳಿ, ಈಗ ದರೋಡೆ ನಡೆಯುತ್ತೆ.

ಜೇನುತುಪ್ಪ: ಯಾವ ಕ್ಯಾ.. ಬಡ್ಡಿಮಕ್ಳು ಅಲುಗಾಡಿದರೂ ಸಾಕು, ಒಬ್ಬೊಬ್ಬ ಕ್ಯಾ... ನನ್ನ್ಮಗನ್ನ ಅಲ್ಳೇ ಎಗರಿಸಿ ಬಿಸಾಕ್ ಬಿಡ್ತೀನಿ. ತಿಳೀತೇನ್ರೋ !